ಹೀಗಾದಲ್ಲಿ ಮುಂಬೈ ಮೇಯರ್ ನಮ್ಮವರೇ ಎಂದ ಉದ್ಧವ್..ಕಡಿಮೆ ಸ್ಥಾನ ಗಳಿಸಿದರು ಕುರ್ಚಿ ಆಸೆ ಬಿಟ್ಟಿಲ್ವಾ ಠಾಕ್ರೆ..? | Uddhav Thackeray

Uddhav Thackeray | ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ
Uddhav Thackeray | ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ
Published on
ಮುಂಬೈ: ಬಿಜೆಪಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ದ್ರೋಹದಿಂದ ಗೆದ್ದಿದೆ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಆರೋಪಿಸಿದ್ದು, ಸರ್ಕಾರ ಮುಂಬೈಯನ್ನು ಅಡಮಾನ ಇಡಲು ಬಯಸಿದ್ದು, ಮುಂಬೈ ಜನರು ಎಂದಿಗೂ ಇದನ್ನು ಮರೆಯುವುದಿಲ್ಲ, ದೇವರು ಇಚ್ಛೆ ಇದ್ದರೆ ತಮ್ಮ ಬಣ ಬಿಎಂಸಿಯಲ್ಲಿ ಮೇಯರ್ ಸ್ಥಾನದಲ್ಲಿ ಕುಳಿತುಕೊಳ್ಳಬಹುದು ಎಂದು ಹೇಳಿದರು.
ಚುನಾವಣೆ ಫಲಿತಾಂಶ ಬಂದ ಒಂದು ದಿನದ ಬಳಿಕ ಮುಂಬೈನ ಶಿವಸೇನಾ ಭವನದಲ್ಲಿ ಪಕ್ಷದ ಕಾರ್ಯಕತ್ರರೊಂದಿಗಿನ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಠಾಕ್ರೆ, ಬಿಜೆಪಿ ನಾಯಕರು ಶಿವಸೇನೆಯನ್ನು ಮುಗಿಸಿದ್ದೇವೆ ಎಂದು ಭಾವಿಸಿದ್ದಾರೆ, ಆದರೆ, ಅದು ಈ ಚುನಾವಣೆಯಲ್ಲಿ ನಡೆದಿಲ್ಲ, ಕೇಸರಿ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎನ್ನುವ ಏಕೈಕ ಉದ್ದೇಶದೊಂದಿಗೆ ಎಲ್ಲಾ ವಿಧಾನಗಳನ್ನು ಬಳಸಿತು ಆದರೆ ಜನರ ನಿಷ್ಠೆಯನ್ನು ಖರೀದಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂದರು.

ಬಿಎಂಸಿಯಲ್ಲಿ ಬಿಜೆಪಿ ಪಾರುಪತ್ಯ

227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳು ಬೇಕು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದ್ದು, ಮಹಾಯುತಿ ಮೈತ್ರಿಕೂಟ 118 ವಾರ್ಡ್​ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನಾಲ್ಕು ದಶಕಗಳಿಂದ ಬಿಎಂಸಿಯನ್ನು ಆಳುತ್ತಿರುವ ಠಾಕ್ರೆ ಬಣವು 65 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿದೆ.
ಈ ಚುನಾವಣೆಯೂ ಠಾಕ್ರೆ ಸಹೋದರರ ಪುನರ್ಮಿಲನಕ್ಕೆ ಸಾಕ್ಷಿಯಾಗಿದ್ದು, ಉದ್ಧವ್​ ಬಣ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮೈತ್ರಿ ಮಾಡಿಕೊಂಡು ಕಣಕ್ಕೆ ಧುಮುಕಿದವು. ಆದರೂ ಕೂಡ ಈ ಮೈತ್ರಿಕೂಟ ಅಧಿಕಾರ ಪಡೆಯಲು ವಿಫಲವಾಗಿದೆ. ಅನೇಕ ವರ್ಷಗಳ ಕಾಲ ಮಹಾರಾಷ್ಟ್ರವನ್ನು ಆಳಿದ್ದ ಕಾಂಗ್ರೆಸ್ ಕೂಡ ಈ ಚುನಾವಣೆಯಲ್ಲಿ ಪ್ರಭಾವ ಬೀರಲು ವಿಫಲವಾಗಿದ್ದು, ಕೇವಲ 24 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಪ್ರಕಾಶ್ ಅಂಬೇಡ್ಕರ್​​ರ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಜೊತೆ ಮೈತ್ರಿ ಮಾಡಿಕೊಂಡು ಕೈ ಪಾಳಯ ಈ ಚುನಾವಣೆಯಲ್ಲಿ ಸ್ಪರ್ಧಿಸಿತ್ತು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net